ಟ್ರೇಸಿ, ಸ್ಪೆನ್ಸರ್
	1900-67. ಅಮೆರಿಕದ ಚಿತ್ರನಟ. 1922ರಲ್ಲಿ ನಟನಾಗಿ ರಂಗಪ್ರವೇಶ ಮಾಡಿ ಅಪಾರ ಅನುಭವ ಗಳಿಸಿದ. 1930ರಿಂದ ತನ್ನ ಜೀವಿತಾಂತ್ಯದ ವರೆಗೆ ಚಲನಚಿತ್ರರಂಗದಲ್ಲಿ ಕೆಲಸ ಮಾಡಿದ. 1930ರ ಅಪ್ ದಿ ರಿವರ್ ಚಿತ್ರದಲ್ಲಿ ಚಿತ್ರನಟನಾಗಿ ಪದಾರ್ಪಣ ಮಾಡಿ ಸುಮಾರು 50 ಚಿತ್ರಗಳಲ್ಲಿ ಈತ ನಟಿಸಿದ್ದಾನೆ. 1967ರಲ್ಲಿ ತೆರೆಗೆ ಬಂದ ಗೆಸ್ ಹೂ ಈಸ್ ಕಮಿಂಗ್ ಟು ಡಿನ್ನರ್ ಚಿತ್ರದೊಂದಿಗೆ ಇವನ ಕಲಾಸೇವೆ ಮುಕ್ತಾಯವಾಯಿತು. ಅತ್ಯಧಿಕ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ಹಾಲಿವುಡ್‍ನ ಪ್ರಸಿದ್ಧ ನಟರಲ್ಲಿ ಈತನೂ ಒಬ್ಬ. ಕಳ್ಳರು, ಕೊಳ್ಳೆಗಾರರು, ದರೋಡೆಗಾರರು, ದುಷ್ಟರು ಮುಂತಾದ ಸಮಾಜ ದ್ರೋಹಿಗಳನ್ನು ಸದೆಬಡೆದ, ಸಮಾಜದ ಹಿತರಕ್ಷಕನ ಪಾತ್ರಗಳಲ್ಲಿ ಈತ ಪ್ರಖ್ಯಾತನಾದ. ಬ್ಯಾಡ್ ಡೇ ಅಟ್ ಬ್ಲ್ಯಾಕ್ ರಾಕ್ (1955) ಮತ್ತು ದಿ ಓಲ್ಡ್ ಮ್ಯಾನ್ ಅಂಡ್ ದಿ ಸಿ (1958) ಚಿತ್ರಗಳಲ್ಲಿ ಸ್ಮರಣೀಯ ಅಭಿನಯ ನೀಡಿದ್ದಾನೆ. ಪ್ರೇಮಾನುರಾಗಿ ನಾಯಕ ಹಾಗೂ ಹಾಸ್ಯಪ್ರಧಾನ ಪಾತ್ರಗಳು ನಿರ್ವಹಣೆಯಲ್ಲೂ ಈತ ಕೀರ್ತಿವಂತನಾದ.

	ಕ್ಯಾಪ್ಟನ್ಸ್ ಕರೇಜಿಯಸ್ (1937) ಹಾಗೂ ಬಾಯ್ಸ್ ಟೌನ್ (1938) ಚಿತ್ರಗಳ ಪಾತ್ರನಿರ್ವಹಣೆಗಾಗಿ ಅಕಾಡೆಮಿ ಪ್ರಶಸ್ತಿಯಾದ ಆಸ್ಕರ್ ಪ್ರತಿಮೆಯನ್ನು ಈತ ಪಡೆದ. 							(ಜೆ.ಎಸ್.ಪಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ